ಕೊಕ್ಕೊ

ಇದೊಂದು ಭಾರತೀಯ ಆಟ. ಕರ್ನಾಟಕದಲ್ಲಿ ಹಳ್ಳಿ ಹಳ್ಳಿಗಳಲ್ಲೂ ಬಳಕೆಯಲ್ಲಿದೆ. (ನೋಡಿ- ಆಟಗಳು) ಪಶ್ಚಿಮ ಭಾರತದಲ್ಲಿದು ಪ್ರಖ್ಯಾತಿ ಗಳಿಸಿದೆ. ಇದಕ್ಕೆ ನಿಯಮಗಳನ್ನೇರ್ಪಡಿಸಿದ ಕೀರ್ತಿ ಮಹಾರಾಷ್ಟ್ರಕ್ಕೆ ಸಲ್ಲಬೇಕು. ಈಗ ಕೊಕ್ಕೊ ಅಧಿಕೃತ ಕ್ರೀಡೆಗಳಲ್ಲೊಂದಾಗಿದೆ. ಈ ಆಟಕ್ಕೆ ಹೆಚ್ಚಿನ ಪರಿಕರಗಳ ಅಗತ್ಯವಿಲ್ಲ. ಒಳ್ಳೆಯ ಮೈದಾನ, ಹನ್ನೆರಡು ಹನ್ನೆರಡು ಮಂದಿ ಇರುವ ಎರಡು ಗುಂಪು ಆಟಗಾರರು. ನೆಡಲು ಬೇಕಾಗುವ ಎರಡು ಕಂಬಗಳು-ಇಷ್ಟಿದ್ದರಾಯಿತು. ಮಿಕ್ಕಂತೆ ಎಲ್ಲ ಆಟಗಳಲ್ಲೂ ಇರುವಂತೆ ಒಬ್ಬ ತೀರ್ಪುಗಾರ, ಇಬ್ಬರು ಉಪ-ತೀರ್ಪುಗಾರರು, ಒಬ್ಬ ಸ್ಕೋರರ್, ಒಬ್ಬ ಟೈಮರ್ ಬೇಕಾಗುತ್ತದೆ.

30ರಿಂದ 40 ಸೆಂ,ಮೀ. ದಪ್ಪವಿರುವ ಗುಂಡನೆಯ ಕಂಬಗಳೆರಡನ್ನು ನೆಲದಿಂದ 4 ಅಡಿ ಅಂದರೆ 120 ಸೆಂ.ಮೀ. ಇರುವ ಹಾಗೆ ಬಲವಾಗಿ ನೆಡಬೇಕು. ಅವೆರಡರ ಮಧ್ಯದ ಅಂತರ ಸುಮಾರಾಗಿ 20-40 ಮೀಟರುಗಳು. ಈ ಕಂಬಗಳನ್ನು ನಡುಮಾಡಿಕೊಂಡು 30 ಮೀಟರ್ ಉದ್ದ 16 ಮೀಟರ್ ಅಗಲ ಇರುವ ಕಣವನ್ನು ಸಿದ್ಧ ಮಾಡುತ್ತಾರೆ (ವಿವರಗಳಿಗೆ ಚಿತ್ರ 1 ನೋಡಿ). ಈ ಕಂಬಗಳು ಬಹು ನುಣುಪಾಗಿರಬೇಕಾಗುತ್ತದೆ. ಇವುಗಳ ತಲೆಗಳೂ ಅಷ್ಟೆ. ಏಕೆಂದರೆ ಓಡುವವರು ಪದೇ ಪದೇ ಈ ಕಂಬಗಳಿಗೆ ಕೈ ಕೊಟ್ಟು ಓಟ ಮುರಿದು ತಿರುವು ತೆಗೆದುಕೊಳ್ಳುತ್ತಾರೆ.
ಆಟಗಾರರ ಗುಂಪಿನಲ್ಲಿ ಒಂದು ಗುಂಪು ಹಿಡಿಯುವ ಕೆಲಸ ಮಾಡುತ್ತದೆ. ಮತ್ತೊಂದು ತಪ್ಪಿಸಿಕೊಂಡು ಓಡುವ ಕೆಲಸ ಮಾಡುತ್ತದೆ. ಯಾವ ಗುಂಪಿಗೆ ಏನು ಕೆಲಸ ಎಂಬುದನ್ನು ನಾಣ್ಯ ಹಾರಿಸಿ ನಿರ್ಧರಿಸುತ್ತಾರೆ. ಹಿಡಿಯುವ ಗುಂಪಿನಲ್ಲಿ 12 ಜನರಿದ್ದರೂ ಒಮ್ಮೆಗೆ ಆಟಕ್ಕಿಳಿಯುವವರು 9 ಮಂದಿ ಮಾತ್ರ. ಉಳಿದವರು ಮೀಸಲು ಆಟಗಾರರು. ತೀರ್ಪುಗಾರರ ಅಪ್ಪಣೆ ಪಡೆದು, ಆಟಕ್ಕಿಳಿದವರ ಬದಲಿಗೆ ಈ ಮೀಸಲು ಆಟಗಾರರು ರಂಗಕ್ಕಿಳಿಯಬಹುದು.

ಆಟ ಪ್ರಾರಂಭವಾಗುವುದಕ್ಕೆ ಮೊದಲು ಹಿಡಿಯುವ ಗುಂಪಿನ ಒಂಬತ್ತು ಜನರಲ್ಲಿ ಎಂಟು ಮಂದಿ ಎರಡು ಗೂಟಗಳ ನಡುವೆ ನಿಗದಿ ಮಾಡಿರುವ ಜಾಗದಲ್ಲಿದ್ದು ಕೊಕ್ ಬಂದ ಕೂಡಲೇ ಓಡಲು ಸಿದ್ಧರಾಗಿರುತ್ತಾರೆ. ಗೂಟಗಳನ್ನು ಉತ್ತರ ದಕ್ಷಿಣವಾಗಿ ನೆಟ್ಟಿದ್ದರೆ ಕೂಡುವವರಲ್ಲಿ ಒಬ್ಬ ಪೂರ್ವಕ್ಕೆ ಮುಖ ಮಾಡಿದರೆ ಅವನ ಪಕ್ಕದವನು ಪಶ್ಚಿಮಕ್ಕೆ ಮುಖಮಾಡಿರುತ್ತಾನೆ. ಹೀಗೆ ನಾಲ್ಕು ಮಂದಿ ಪೂರ್ವಕ್ಕೂ 4 ಮಂದಿ ಪಶ್ಚಿಮಕ್ಕೂ ಮುಖಮಾಡಿರುತ್ತಾರೆ. ಒಂಬತ್ತನೆಯವನೆ ಓಡಿ ಹಿಡಿಯುವವ. ಹಿಡಿಯುವವ ಕಂಬ ಸುತ್ತಿಯೇ ಹೋಗಬೇಕು, ಕಂಬದ ನಡುವಿನ ಜಾಗದಲ್ಲಿ ಅಡ್ಡಹಾಯ್ದು ಆಚೆ ಬದಿಗೆ ಹೋಗುವಂತಿಲ್ಲ. ಅಲ್ಲದೆ ತಾನು ಓಡುತ್ತಿರುವ ದಿಕ್ಕನ್ನು ಬದಲಾಯಿಸುವಂತೆಯೂ ಇಲ್ಲ. ಓಡುವವರಿಗೆ ಈ ನಿಯಮವಿಲ್ಲ. ಅವರು ಕಂಬದ ನಡುವೆ ಅತ್ತ ಇತ್ತ ಓಡಬಹುದು. ಓಡುವ ದಿಕ್ಕನ್ನೂ ಬದಲಿಸಬಹುದು. ಹಿಡಿಯಲು ಓಡುವವನು ತನಗೆ ಸುಸ್ತು ಎನಿಸಿದಾಗ ಅಥವಾ ಎದುರಾಳಿಗಳು ವಿರುದ್ಧ ಪಾಶ್ರ್ವದಲ್ಲಿದ್ದಾಗ, ಕುಳಿತ ಯಾವನಾದರೊಬ್ಬನ ಬೆನ್ನು ಮುಟ್ಟಿ ಕೊಕ್ ಎಂದು ಕೂಗಿ ಅವನನ್ನು ಹಿಡಿಯಲು ಅಟ್ಟಿ ಅವನ ಜಾಗದಲ್ಲಿ ಕೂಡಬಹುದು. ಈ ಒಂದು ಅವಕಾಶ ಇರುವುದರಿಂದ ತಪ್ಪಿಸಿಕೊಂಡು ಓಡಿ ಹೋಗುವವರಿಗೂ ಬಹಳ ಕಷ್ಟವಾಗುತ್ತದೆ. ಕೊಕ್ ಕೊಡಿಸಿಕೊಂಡು ಎದ್ದು ಓಡುವವನು ತನ್ನ ಎರಡು ಭುಜಗಳು ಎಡಕ್ಕೆ ತಿರುಗಿದ್ದರೆ ಎಡಕ್ಕೇ ಓಡಬೇಕು. ಬಲಕ್ಕೆ ತಿರುಗಿದ್ದರೆ ಬಲಕ್ಕೆ ಓಡಬೇಕು. ಮನಸ್ವೀ ದಿಕ್ಕು ಬದಲಾಯಿಸುವಂತಿಲ್ಲ. ಇದರಿಂದಾಗಿ ಆಟದ ಸ್ವಾರಸ್ಯ ಹೆಚ್ಚುತ್ತದೆ.

ಹಿಡಿಯುವವರು ಒಂಬತ್ತು ಜನರೂ ಅಖಾಡಕ್ಕೆ ಇಳಿದಂತೆ ಓಡುವ ಒಂಬತ್ತು ಜನರೂ ಒಟ್ಟಿಗೆ ಇಳಿಯಬೇಕಾಗಿಲ್ಲ. ಒಮ್ಮೆಗೆ ಮೂರರಂತೆ ಅವರು ಸಾಮಾನ್ಯವಾಗಿ ಆಟಕ್ಕೆ ಇಳಿಯುತ್ತಾರೆ. ಮೊದಲ ಮೂವರು ಚಿತ್ತಾದ ನಿಮಿಷದಲ್ಲೇ ಮತ್ತೆ ಮೂವರು ಆಟಕ್ಕೆ ಇಳಿಯುತ್ತಾರೆ. ಅಲ್ಪಸ್ವಲ್ಪ ತಡವಾದರೂ ಅವರಿಗೆ ಆಟದ ಅವಕಾಶ ದೊರೆಯದು.

ಆಟಗಾರರೆಲ್ಲರೂ ನಿಗದಿಯಾದ ಆಟದ ಮೈದಾನದ ಪರಿಮಿತಿಯಲ್ಲೇ ಓಡಬೇಕು. ಹೆಜ್ಜೆ ಗೆರೆಯ ಹೊರಗಾದರೆ ಚಿತ್ತು. ಓಡುವವರು ಕೂತವರನ್ನು ಮುಟ್ಟಬಾರದು. 
ಒಂಬತ್ತು ಜನರ ಪ್ರತಿಯೊಂದು ಪಂಗಡವೂ ಒಂದು ಸಾರಿ ಓಡುವುದು (9 ಮಿನಿಟ್) ಮತ್ತು ಒಂದು ಸಾರಿ ಹಿಡಿಯುವುದು (9 ಮಿನಿಟ್) ಮಾಡಿದಲ್ಲಿ ಒಂದು ಇನ್ನಿಂಗ್ಸ್ ಆದಂತೆ. ಇದಕ್ಕೆ ನಿಗದಿಯಾಗಿರುವ ಕಾಲ 18 ಮಿನಿಟುಗಳು. ಒಂದು ಇನಿಂಗ್ಸ್ ಮುಗಿದ ಮೇಲೆ 9 ನಿಮಿಷಗಳ ವಿರಾಮ. ಒಂದು ಸುತ್ತು ಮುಗಿದಾಗ ಐದು ನಿಮಿಷ ವಿರಾಮ.

ಕರ್ನಾಟಕದ ಎಸ್. ಪ್ರಕಾಶ್ ಹಾಗೂ ಶೋಭಾ ನಾರಾಯಣ ಕೊಕ್ಕೊನಲ್ಲಿ ಅಪ್ರತಿಮ ಸಾಧನೆಯೊಂದಿಗೆ ಅರ್ಜುನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬೆಳಗಾವಿಯ ಕಡೊಲಿ ಎಂಬ ಗ್ರಾಮದ ಶ್ಯಾಮಲಾ ಪಾಟೀಲ ಎಂಬ ಆಟಗಾರ್ತಿ ತನ್ನ ಅಮೋಘ ಆಟದಿಂದ, ಕರ್ನಾಟಕ ಏಳು ಸಲ ರಾಷ್ಟ್ರೀಯ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದರು. 						(ಬಿ.ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ